Sunday, March 3, 2013

ಹರವು

    ಹರವು
ಹಸಿರು ಹಬ್ಬಿಹುದು ಸುವಿಶಾಲವಾಗಿ
ಸೌಂದರ್ಯ ಕಲೆತಿಹುದದರೊಳಗೆ ಕರಗಿ
ಮಧ್ಯದೊಳಿಣಿಕಿದೆ ಎಳೆ ಹಳದಿ ಹೂವು
ಅದರಿಂದ ಹೆಚ್ಚಿಹುದು ಸೌಂದರ್ಯದ ಹರವು.

ಕೆಂಪು ಇಟ್ಟಿಗೆಯ ಭೂಮ ಘನ ಗೋಡೆ
ಮೃಣ್ಮಯ ಪೆಂಪಿನ ಸಿರಿಸುಂದರ ಬೀಡು.
ಮಧ್ಯದಲಿ ನಿಂತಿಹುದು ಬಿಳಿಯ ಹೆಬ್ಬಾಗಿಲು,
ಅದರಿಂದ ಹೆಚ್ಚಿಹುದು ಪೆಂಪಿನ ಹರವು.

ಸಂಪೂರ್ಣ ಕರಿಗತ್ತಲ ಶುಭ್ರ ಆಗಸ
ಚುಕ್ಕಿಗಳು ಚಮಕಿದರೂ ಕೊಂಚ ನೀರಸ.
ಮೋಡಗಳ ಹಿಂದಿಂದ ಬರುವಾಗ ಚಂದ್ರ
ಸೌಂದರ್ಯದ ಸಗ್ಗಕ್ಕೆ ಆಗಸವೆ ಇಂದ್ರ.

ಅನುದಿನವು ತುಳಿಯುತಿಹೆ ಅನುಭವದ ಪಥವ
ಆಗಾಗ ಬಿಡಿಸಿಹೆನು ಹೊಸತನದ ಹೂವ.
ಪ್ರಿಯಜಾತೆ "ಸೃಷ್ಟಿ" ನೀ ಬಾರಲು ದಾರಿಯಲಿ
ಹೆಚ್ಚಿಹುದು ಬಾಳಿನಲಿ ಹೊಸತನದ ಹರವು.

ಬರೆದಿಹೆನು ನಾನೆನಿತೊ ಚಿತ್ರಗಳ ಕಂತೆ.
ಯುಕ್ತಿಕುಂಛವನು ಬಾಳ ಬಣ್ಣಗಳಲದ್ದಿ.
ಮಮತೆಯ ಹೊಸಬಣ್ಣ ನೀ ತಂದಿಹೆ ಮಗಳೆ
ಪ್ರಾಪ್ತಿಯಾಗಿಹುದಿಂದು  ಹೊಸಚಿತ್ರದ ಸಿದ್ದಿ.

        - ಚಂದ್ರಹಾಸ ( ೩ - ಮಾರ್ಚ್ - ೨೦೧೩)

No comments:

Post a Comment