Sunday, October 8, 2023

ಚೆಲುವಿಹುದು ಹೊರಗೆ ಚೆಲುವಿಹುದು ಒಳಗೆ

ಕಾಶ್ಮೀರ ಎಂದ ತಕ್ಷಣ ಕಣ್ಣಿಗೆ ರಾಚುವುದು ಇಂದು ಹಿಂಸೆಯೇ. ಆದರೆ ಆ ಹಿಂಸೆಯನ್ನು ಮರೆಮಾಚಿಸುವ ಸೊಬಗಿಗೆ , ಆಥವಾ ಹಿಂಸೆಯನ್ನೂ ಸಹಿಸಿಕೊಂಡು ಇನ್ನೂ ಮನೋಹರತೆಯನ್ನು ಹೊರ ಸೂಸುತ್ತಿರುವುದಕ್ಕೆ,  ಕಣಿವೆಗಳ ನಡುವೆ ಹಾದುಹೋದ ನಮ್ಮ ಪ್ರವಾಸವೇ ಸಾಕ್ಷಿ. "ಕಾಶ್ಮೀರ್ ಬೊಹತ್ ಸುಂದರ್ ಹೇ ಸಾಬ್ ! ಮಗರ್ ಕ್ಯ ಕರೇ ಹಮಾರ ನಸೀಬ್ ಸುಂದರ್ ನಹೀ ಹೇ" ಎಂದು ನಮ್ಮ ಡ್ರೈವರ್ ಹೇಳುವಾಗ , ಇಡೀ ಕಾಶ್ಮೀರದ ಅತಂತ್ರ ಸ್ಥಿತಿ ಅವನ ಕೊರ್‍ಅಳಲ್ಲಿ ಗದ್ಗತಿಸಿತು. 
                           ಮೊದ ಮೊದಲು ಮಿಲಿಟರಿ ಸಮಸ್ತ್ರಗಳು , ಸಶಸ್ತ್ರ ಪಡೆಗಳೇ ಕಂಡದ್ದಾದರೂ, ನೋಡ ನೋಡುತ್ತಾ ಹಸಿರು ಬೆಟ್ಟಗಳ ಚೆಲುವು, ಕಲ್ಬಂಡೆಗಳ ನಡುವೆ ನುಸುಳಿ ಹರಿಯುವ ಝರಿಗಳು, ತಪ್ಪಲಿನಲ್ಲಿ ನಿರ್ಲಿಪ್ತತೆಯಿಂದ ಮೇಯುತ್ತಿದ್ದ ಕುರಿಗಳ ದಂಡು, ಅಲ್ಲಿನ ಜನಗಳ ವೇಷ ಭೂಷಣಗಳು ನಮ್ಮ ವಿಕ್ಷುಬ್ಧ ಮನಸ್ಸುಗಳನ್ನು ತಿಳಿಯಾಗಿಸತೊಡಗಿತ್ತು. ಮುದುಡಿದ್ದ ಭಾವ ಮೆಲ್ಲ ಮೆಲ್ಲನೆ ಅರಳಿ ಸುತ್ತಲಿನ ಸೌದರ್ಯವನ್ನು ಆಸ್ವಾದಿಸತೊಡಗಿತ್ತು!! ಹಾಗೆ ನನ್ನ ಮನಸ್ಸು ನಿಧಾನವಾಗಿ ಕವಿಯಾಗತೊಡಗಿತು. ಟಿಟಿ ಯಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತ ಕವಿ ಮನಸ್ಸು, ಮೆತ್ತಗೆ ಕಾಗದದ ತುಂಡಿನಲ್ಲಿ ಹೇಳಲಾಗುದದನ್ನು ಹೇಳುವುದಕ್ಕೆ ಪ್ರಯತ್ನಿಸುತ್ತಿತ್ತು. ಆ ಅವರ್ಣನೀಯ ಚೆಲುವಿನ ಹಿಮಪರ್ವತದ ಬಿಂದು ಮಾತ್ರವೇ ಈ ಕೆಳಗಿನ ಒಂದು ಸಣ್ಣ ಕವನ .....

|| ಚೆಲುವಿಹುದು ಹೊರಗೆ ಚೆಲುವಿಹುದು ಒಳಗೆ ||

ನೋಡಲ್ಲಿ ಕಾಶ್ಮೀರ ಕಣಿವೆಗಳ ನಾಡು
ನದಿ ಸರೋವರ ಕೆರೆ ನಿರ್ಝರಿಯ ಬೀಡು

ಹಿಮ ಮುಕುಟ ಶೃಂಗದುತ್ತುಂಗ ಸಾಲು
ಬೆಟ್ಟಗಳ ಬಳಸಿನಲಿ ಬಳುಕುತಿವೆ ಬಯಲು
ಸಾಗುತಿವೆ ಕಣಿವೆಯಲಿ ಮೋಡಗಳ ನೆಳಲು
ನುಡಿಸುತಿದೆ ಸುಳಿಗಾಳಿ ಮರ್ಮರದ ಕೊಳಲು

ಸಸ್ಯರಾಶಿಯ ಮೇಲೆ ಹಸಿರ್ಗೆಂಪು ಹಳದಿ
ಕಂದರದಲಿಳಿಯುತಿದೆ ಹಿಮ ಕರಗಿ ಭರದಿ
ಹೂವಿರದ ಬೆಟ್ಟದಲಿ ಮೌನ ವಿಶ್ರಾಂತ
ಹಸಿರಿರದ ಬಯಲಿನಲಿ ಬರಡೆ ಶ್ರೀಮಂತ

ಶ್ರಮವೆ ಬದುಕಿಲ್ಲಿ ಸಹನೆ ಬಾಳಿಲ್ಲಿ
ಸರಳತೆಯು ತೂಗಿನಲಿ ಜೀವನ ಜೋಕಾಲಿ
ಮುಗ್ಧತೆಯು ಹೇಳುತಿದೆ ನೆಲದ ಕಥೆಯಿಲ್ಲಿ
ಚರಿತ್ರೆಯೆ ಹುದುಗಿಹುದು ನಗುವ ಮೊಗದಲ್ಲಿ

ನಿರಂಕುಶ ಪ್ರಕೃತಿಯೆ ಸೌಂದರ್ಯವಿಲ್ಲಿ
ಹೇಳಲಾಗದನು ಹೇಳಿದೆ ನಿಶ್ಯಬ್ಧದಲ್ಲಿ !!
ಚೆಲುವು ಬರಿ ಕಾಣಿಸದೆ ತಾಗುತಿದೆ ಒಳಗೆ
ಚೆಲುವಿಹುದು ಹೊರಗೆ ಚೆಲುವಿಹುದು ಒಳಗೆ.

ಓ ಮನವೆ ಬಾಯಿಲ್ಲಿ ಕಾಣು ಕಾಶ್ಮೀರ
ಸೌಂದರ್ಯದನುಭೂತಿಗಿದುವೆ ನೆಲ ಬಾರ !!

 - ಚಂದ್ರಹಾಸ ( ೨೮-೯-೨೦೧೭)

Friday, June 23, 2023

ಯಾರದೀ ಧ್ವನಿಯು?

ಯಾರದೀ ಧ್ವನಿಯು?

ಹಾದಿ ಮುಚ್ಚಿದೆ, ಗುಡಿಯು ಮುಚ್ಚಿದೆ,
ಮುಚ್ಚಿವೆ ಮಾಲ್, ಕಂಪನಿ.
ತೆರೆದಿವೆ ಆಸ್ಪತ್ರೆ , ಇಂಧನ,
ದಿನಸಿ, ಔಷದಿ ಅಂಗಡಿ.

ತೆರೆಯಿತೆ ಎದೆ ಕದಗಳು?

ಕವಚ ಮುಚ್ಚಿದ ಮುಖದ ಕಣ್ಣಲಿ
ಬತ್ತಿವೆ ಭರವಸೆಗಳು.
ಆಸೆಗಳ ನೆಲದ ಮಣ್ಣಲಿ
ಬತ್ತಿವೆ ಮಳೆ ಹನಿಗಳು.

ಜಿನುಗಿತೆ ಹೊಸ ದೃಷ್ಟಿಯು?


ನಡೆವ ದಾರಿಯ ಉಬ್ಬು ತಗ್ಗಲಿ
ನನ್ನದೊಂದೇ ಹೆಜ್ಜೆ ಜಾಡು.
ಏಕವಾಗಿದೆ ಕಾಡು-ನಾಡು,
ಪ್ರಾಣಿ-ಪಕ್ಷಿ, ಬದುಕು-ಬೀಡು.

ಏಕವಾಯಿತೆ ಮೇಲೆ-ಕೀಳು?

ಗಾಢ ಮೌನದ ಮಡುವಿನಲ್ಲಿ
ಕೇಳಿಸಿದೆ ಅಜ್ಞಾತ ಧ್ವನಿಯು.
ಯಾರ ದನಿಯೋ ತಿಳಿಯದಾದೆ
ಕೂಗಿ ಕೇಳಿದೆ ಅರಿವನು!

ಯಾರದೀ ಧ್ವನಿಯು?


        -   17-Apr-2020 ( ಕರೋನ ಸಮಯ)

Saturday, January 11, 2014

ಗಟ ಗಟ ಗಟ ಗಟ ಗಟ ......

ಗಟ ಗಟ ಗಟ ಗಟ ಗಟ ......

ನನ್ನ ಮಗಳು ಹಾಲು ಕುಡಿಯುವುದಕ್ಕೆ ಅಳುತಿದ್ದಾಗ, ಅವಳನ್ನು ಹೇಗಾದರು ರಂಜಿಸಿ, ಮನವೊಲಿಸಿ, ಹಾಲು ಕುಡಿಸಬೇಕೆಂದು ಯೋಚಿಸುತ್ತಿರುವಾಗ, ಆಶುಕವಿತೆಯಾಗಿ ಈ ಸಣ್ಣ ಪದ್ಯಯೊಂದು ಮೂಡಿತು. ಪದ್ಯದ ಜೊತೆಗೆ ಅದನ್ನು ಹೇಗೆ ಹಾಡಬೇಕೆಂಬು ನನ್ನ ಅಸಹಾಯಕತೆಯ ಕತ್ತಲೆಯಲ್ಲಿ , ಮಿಂಚಿನಂತೆ ಹೊಳೆಯಿತು. ನಿಂತಲ್ಲೇ ಪದ್ಯವನ್ನೂ ರಚಿಸಿ, ನಟಿಸಿ ನರ್ತಿಸಿಯೂ ಬಿಟ್ಟೆ.
ಇಲ್ಲಿ ಪದ್ಯದ ಅರ್ಥವು ವಿಶೇಷವಾಗಿರದಿದ್ದರು, ಆವೇಶಭರಿತ ಯಕ್ಷಗಾನ ಪಾತ್ರವೊಂದರಂತೆ ಇದನ್ನು ಹಾಡಿದಾಗ, ನನ್ನ ಮಗಳಿಗೆ ವಿಶೇಷವಾಗಿ, ಆಕರ್ಷಣೀಯವಾಗಿ, ಮನೋರಂಜಕವಾಗಿ ಕಂಡಿತು. ಅದನ್ನ ನೋಡಿದ್ದೇ ತಡ ಯಾವ ತೊಡಕಿಲ್ಲದೇ ಸಲೀಸಾಗಿ ಹಾಲು ಅವಳ ಗಂಟಲೊಳಗೆ ಇಳಿಯತೊಡಗಿತು. ಲೋಟ ಎರೆಡೇ ನಿಮಿಷದಲ್ಲಿ ಖಾಲಿಯಾಯಿತು.

ಗಟ ಗಟ ಗಟ ಗಟ ಗಟ ಗಟ ಗಟ ಗಟ 
ಗಟ ಗಟ ಗಟ ಗಟ ಗಟ ಗಟ ಗಟ ಗಟ 
ಗಟಗಟವೆಂದಾಲು ಕುಡಿಯುವೆ,
ಹೊಟ್ಟೆಯ ಒಳಗೆ ಹಾಲು ಹೋಯಿತು,
ಮೂಳೆಯ ಒಳಗೆ ಹಾಳು ಸೇರಿತು.
ಗಟ ಗಟ ಗಟ ಗಟ ಗಟ ಗಟ ಗಟ ಗಟ 
ಗಟ ಗಟ ಗಟ ಗಟ ಗಟ ಗಟ ಗಟ ಗಟ 
ತಲೆಯ ಒಳಗೆ ಹಾಲು ಸೇರಿತು,
ಎದೆಯ ಒಳಗೆ ಹಾಲು ಸೇರಿತು,
ನನಗೆ ತುಂಬ ಶಕ್ತಿ ಬಂದಿತು.
ಗಟ ಗಟ ಗಟ ಗಟ ಗಟ ಗಟ ಗಟ ಗಟ 
ಗಟ ಗಟ ಗಟ ಗಟ ಗಟ ಗಟ ಗಟ ಗಟ 
ಕಣ್ಣಿಗೆ ಈಗ ಹಾಲು ಸೇರಿತು,
ಕಿವಿಗೆ ಕೂಡ ಹಾಲು ಸೇರಿತು,
ಮೈಯ್ಯೊಳಗೆಲ್ಲ ಶಕ್ತಿ ತುಂಬಿತು
ಗಟ ಗಟ ಗಟ ಗಟ ಗಟ ಗಟ ಗಟ ಗಟ 
ಗಟ ಗಟ ಗಟ ಗಟ ಗಟ ಗಟ ಗಟ ಗಟ 

"ಗಟ ಗಟ ಗಟ ಗಟ" ಎಂದು ಹಾಡುವಾಗ, ಶಿವತಾಂಡವ ನೃತ್ಯದಂತೆ ನಮ್ಮ ಹಾವಭಾವಗಳು ಅತ್ಯಾವೇಶದ ತುತ್ತತುದಿಯನ್ನು ಮುಟ್ಟಿರಬೇಕು. ಕಣ್ಣುಗಳು ಅರಳಿಸಿ ಕೈಗಳು ಅದುರುತ್ತಿರಬೇಕು. 
ಮೂಳೆ, ಎದೆ, ಕಣ್ಣು, ಕಿವಿ, ಮೈಯ್ಯಿ ಈ ಪದಗಳನ್ನು ಉಚ್ಚರಿಸುವಾಗ, ಆ ಬಾಗಗಳನ್ನೆಲ್ಲ ಮುಟ್ಟಿ ಹಾಲು ಅಲ್ಲಿಗೆಲ್ಲಾ ಹರಿಯುತ್ತಿದೆ ಎಂಬುದಾಗಿಯು, ನಮಗೆ ಅದರಿಂದ ಶಕ್ತಿ ಬರಲು ಶುರುವಾಗಿದೆ ಎಂಬುದಾಗಿಯು, ಮಗುವಿನ ಅರಿವಿಗೆ ನಾಟುವಂತೆ ನಟಿಸಿ ತೋರಿಸಬೇಕು.

ಇದು ನಾನು ಕಂಡುಕೊಂಡ ಪದ್ಯದಾರಿ :-) ಎಲ್ಲರಿಗೂ ಒಪ್ಪುವುದೋ ಬಿಡುವುದೋ ನಾ ಕಾಣೆ. ಆದರೆ ಇದರಿಂದ ಉತ್ತೇಜನಗೊಂಡು, ಅಪ್ಪ ಅಮ್ಮಂದಿರು, ತಾತ ಅಜ್ಜಿಯರು ಬೇರೆ ರೀತಿಯ ಕ್ರಿಯಾಶೀಲತೆಯನ್ನು ಉಪಯೋಗಿಸಿ, ಮಕ್ಕಳ ಮುಂದೆ ಒಂದು ರೀತಿಯ ಭ್ರಮಾಲೋಕವನ್ನೆ ಸೃಷ್ಟಿಸಿದರೂ ಸರಿ. ಇಲ್ಲಿ ಮುಖ್ಯವಾದುದು ಮಗು ಆಳದೆ ಹಾಲು ಕುಡಿಯಬೇಕಾದದ್ದು, ಆಥವ ಊಟ ತಿನ್ನಬೇಕಾದದ್ದು. ಅದೊಂದೇ ಗಣ್ಯ ..ಮಿಕ್ಕೆಲ್ಲಾ ವಿಶ್ವಘಟನೆಗಳು ನಮಗೆ ನಗಣ್ಯ !!!