Sunday, October 8, 2023

ಚೆಲುವಿಹುದು ಹೊರಗೆ ಚೆಲುವಿಹುದು ಒಳಗೆ

ಕಾಶ್ಮೀರ ಎಂದ ತಕ್ಷಣ ಕಣ್ಣಿಗೆ ರಾಚುವುದು ಇಂದು ಹಿಂಸೆಯೇ. ಆದರೆ ಆ ಹಿಂಸೆಯನ್ನು ಮರೆಮಾಚಿಸುವ ಸೊಬಗಿಗೆ , ಆಥವಾ ಹಿಂಸೆಯನ್ನೂ ಸಹಿಸಿಕೊಂಡು ಇನ್ನೂ ಮನೋಹರತೆಯನ್ನು ಹೊರ ಸೂಸುತ್ತಿರುವುದಕ್ಕೆ,  ಕಣಿವೆಗಳ ನಡುವೆ ಹಾದುಹೋದ ನಮ್ಮ ಪ್ರವಾಸವೇ ಸಾಕ್ಷಿ. "ಕಾಶ್ಮೀರ್ ಬೊಹತ್ ಸುಂದರ್ ಹೇ ಸಾಬ್ ! ಮಗರ್ ಕ್ಯ ಕರೇ ಹಮಾರ ನಸೀಬ್ ಸುಂದರ್ ನಹೀ ಹೇ" ಎಂದು ನಮ್ಮ ಡ್ರೈವರ್ ಹೇಳುವಾಗ , ಇಡೀ ಕಾಶ್ಮೀರದ ಅತಂತ್ರ ಸ್ಥಿತಿ ಅವನ ಕೊರ್‍ಅಳಲ್ಲಿ ಗದ್ಗತಿಸಿತು. 
                           ಮೊದ ಮೊದಲು ಮಿಲಿಟರಿ ಸಮಸ್ತ್ರಗಳು , ಸಶಸ್ತ್ರ ಪಡೆಗಳೇ ಕಂಡದ್ದಾದರೂ, ನೋಡ ನೋಡುತ್ತಾ ಹಸಿರು ಬೆಟ್ಟಗಳ ಚೆಲುವು, ಕಲ್ಬಂಡೆಗಳ ನಡುವೆ ನುಸುಳಿ ಹರಿಯುವ ಝರಿಗಳು, ತಪ್ಪಲಿನಲ್ಲಿ ನಿರ್ಲಿಪ್ತತೆಯಿಂದ ಮೇಯುತ್ತಿದ್ದ ಕುರಿಗಳ ದಂಡು, ಅಲ್ಲಿನ ಜನಗಳ ವೇಷ ಭೂಷಣಗಳು ನಮ್ಮ ವಿಕ್ಷುಬ್ಧ ಮನಸ್ಸುಗಳನ್ನು ತಿಳಿಯಾಗಿಸತೊಡಗಿತ್ತು. ಮುದುಡಿದ್ದ ಭಾವ ಮೆಲ್ಲ ಮೆಲ್ಲನೆ ಅರಳಿ ಸುತ್ತಲಿನ ಸೌದರ್ಯವನ್ನು ಆಸ್ವಾದಿಸತೊಡಗಿತ್ತು!! ಹಾಗೆ ನನ್ನ ಮನಸ್ಸು ನಿಧಾನವಾಗಿ ಕವಿಯಾಗತೊಡಗಿತು. ಟಿಟಿ ಯಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತ ಕವಿ ಮನಸ್ಸು, ಮೆತ್ತಗೆ ಕಾಗದದ ತುಂಡಿನಲ್ಲಿ ಹೇಳಲಾಗುದದನ್ನು ಹೇಳುವುದಕ್ಕೆ ಪ್ರಯತ್ನಿಸುತ್ತಿತ್ತು. ಆ ಅವರ್ಣನೀಯ ಚೆಲುವಿನ ಹಿಮಪರ್ವತದ ಬಿಂದು ಮಾತ್ರವೇ ಈ ಕೆಳಗಿನ ಒಂದು ಸಣ್ಣ ಕವನ .....

|| ಚೆಲುವಿಹುದು ಹೊರಗೆ ಚೆಲುವಿಹುದು ಒಳಗೆ ||

ನೋಡಲ್ಲಿ ಕಾಶ್ಮೀರ ಕಣಿವೆಗಳ ನಾಡು
ನದಿ ಸರೋವರ ಕೆರೆ ನಿರ್ಝರಿಯ ಬೀಡು

ಹಿಮ ಮುಕುಟ ಶೃಂಗದುತ್ತುಂಗ ಸಾಲು
ಬೆಟ್ಟಗಳ ಬಳಸಿನಲಿ ಬಳುಕುತಿವೆ ಬಯಲು
ಸಾಗುತಿವೆ ಕಣಿವೆಯಲಿ ಮೋಡಗಳ ನೆಳಲು
ನುಡಿಸುತಿದೆ ಸುಳಿಗಾಳಿ ಮರ್ಮರದ ಕೊಳಲು

ಸಸ್ಯರಾಶಿಯ ಮೇಲೆ ಹಸಿರ್ಗೆಂಪು ಹಳದಿ
ಕಂದರದಲಿಳಿಯುತಿದೆ ಹಿಮ ಕರಗಿ ಭರದಿ
ಹೂವಿರದ ಬೆಟ್ಟದಲಿ ಮೌನ ವಿಶ್ರಾಂತ
ಹಸಿರಿರದ ಬಯಲಿನಲಿ ಬರಡೆ ಶ್ರೀಮಂತ

ಶ್ರಮವೆ ಬದುಕಿಲ್ಲಿ ಸಹನೆ ಬಾಳಿಲ್ಲಿ
ಸರಳತೆಯು ತೂಗಿನಲಿ ಜೀವನ ಜೋಕಾಲಿ
ಮುಗ್ಧತೆಯು ಹೇಳುತಿದೆ ನೆಲದ ಕಥೆಯಿಲ್ಲಿ
ಚರಿತ್ರೆಯೆ ಹುದುಗಿಹುದು ನಗುವ ಮೊಗದಲ್ಲಿ

ನಿರಂಕುಶ ಪ್ರಕೃತಿಯೆ ಸೌಂದರ್ಯವಿಲ್ಲಿ
ಹೇಳಲಾಗದನು ಹೇಳಿದೆ ನಿಶ್ಯಬ್ಧದಲ್ಲಿ !!
ಚೆಲುವು ಬರಿ ಕಾಣಿಸದೆ ತಾಗುತಿದೆ ಒಳಗೆ
ಚೆಲುವಿಹುದು ಹೊರಗೆ ಚೆಲುವಿಹುದು ಒಳಗೆ.

ಓ ಮನವೆ ಬಾಯಿಲ್ಲಿ ಕಾಣು ಕಾಶ್ಮೀರ
ಸೌಂದರ್ಯದನುಭೂತಿಗಿದುವೆ ನೆಲ ಬಾರ !!

 - ಚಂದ್ರಹಾಸ ( ೨೮-೯-೨೦೧೭)

No comments:

Post a Comment