Wednesday, December 2, 2009

ಜನುಮ ಜನುಮದ ಮೈತ್ರಿ

This poem is dedicated to Bavya and Srushti.

**** ಜನುಮ ಜನುಮದ ಮೈತ್ರಿ *****

ನವಮಾಸ ಹೊತ್ತು ಹಡೆದ ಕೂಸು ಮಲಗಿರಲು,
ಕಣ್ತುಂಬದನು ನೋಡಿ ದೃಷ್ಟಿ ತೆಗೆದಳು ತಾಯಿ.
ಬೆಳ್ಮುಗಿಲ ಚೆಲುವೊತ್ತ ಕಂದನಾಗಿಹುದು, ಜನನಿಯ
ಹೃದಯ ಚಿತ್ರಪಟದಲ್ಲಿ ಚಿರಸ್ಥಾಯಿ. |೧|

ಶಿಶುಪಾಲನೆಯ ಕ್ಷೀರಸಾಗರವಂ ಕಡೆದು
ಮಮತೆಯಮೃತವ ಪಡೆವಲ್ಲಿ ತಾಯಿ ಮಗ್ನ.
ನವಶಿಶುವ ಪ್ರೀತಿಯಲಿ ಪೋಷಿಸಲವಳು
ಸುಳಿಗೊಡಳಲೆಲ್ಲೂ ಪೋಷಣೆಯಲಿ ವಿಘ್ನ. |೨|

ಮುಂಜಾನೆಯ ಮುಂಬಿಸಿಲು ಕಿಟಕಿಯೊಳಗೆ ನುಸುಳಿ,
ಹಸುಗಂದನ ಕಮಲನಯನಗಳಿಗೆ ಕಚಗುಳಿಯಿಟ್ಟದನೆಬ್ಬಿಸಲು,
ಒಡೋಡಿಬಂದದನಪ್ಪಿ ಮುದ್ದಾಡಿ ಸುತ್ತ ತಿರುಗಿಸಲು ತಾಯಿ,
ಕಿಲಕಿಲವೆಂದುಕ್ಕಿಸಿದೆ ಮಗುವು ನಗುವಿನ ಹೊನಲು  |೩|

ಮೃದುಚರ್ಮಧಾರಿಗೆ ತೈಲವಿಲೇಪಿಸಿ ಅಭ್ಯಂಗ ಮಾಡಿಸೆ,
ಉಸಿರ್ಗಟ್ಟಿ ಅಳುವ ಮೊಗದಲ್ಲಿ ಚಿಮ್ಮಿದೆ ಕೆಂದಿರಾಂಶು.
ಮಜ್ಜನವ ಮುಗಿಸಿ, ಮೈಯೊದ್ದೆ ಒಣಗಿಸಿ, ಸಾಂಮ್ರಾಣಿಧೂಪದಲಿ ಮೀಯಲು,
ತಾಯ್ ಕರದೊಳಗೆ ಬೆಚ್ಚಗೆ ಮಲಗಿಹ ಕಂದ ಚಲ್ಲಿಹುದು ಅಮೃತಾಂಶು.  |೪|

ಮನೆಮುಗಿಲ ಚಪ್ಪರದಿ ಜೋತಾಡುವ ನೇಕೆಯೊಳು
ಹಸುಗೂಸ ತೂಗಿ, ಹಾಡಿರುವಳು ತಾಯಿ ಜೋಗುಳವ.
ಕಂಠಸಿರಿಂದೊರಟ ಲಾವಣಿಯನಾಲಿಸಿ ಹೊರಟಿಹುದು ಮಗುವು,
ಕ್ಷಣ ಕ್ಷಣದೆ ಜಾರಿ, ಸೇರಲು ನಿದ್ರಾಲೋಕವ   |೫|

ಪಸಿವು ನರ್ತಿಸಲು ಕಂದನೊಡಲಲಿ,
ಉಣಿಸುವಳು ಮಾತೆ ಪ್ರೀತಿಯಲಿ ತನ್ನೆದೆಯ ಸುಧೆ.
ಕ್ಷೀರ ಸೇರಲು ಉದರ ದೂರಕೆ,
ತೇಗಿಹುದು ಮಗುವು ಕರಗಿಸಿ ಪಸಿವ ಬಾಧೆ.  |೬|

ಉದರಶೂಲೆ, ಜ್ವರ, ಶೀತ, ಕೆಮ್ಮಿಗೆ,
ಸೊರಗಿ ಬಿಕ್ಕಿ ಅಳುತಿರಲು ಮಗುವು.
ಕ್ಷತವಿಕ್ಷಿತ ಮನದಾಳದಿಂದುಕ್ಕುವ ದುಮ್ಮಾನ
ದೃಗುಜಲ, ಮಾಡಿಹುದು ತಾಯ್ ಕಣ್ಗಳ ತೇವು  |೭|

ರಾಗಿ ತುಪ್ಪವ ಬೆರಸಿ, ಬೆಳ್ಳಿ ಬಟ್ಟಳೊಲು ಕಲಸಿ,
ಬೆರಳತುದಿಯೊಳಗದನಿರಿಸಿ ತಿನಿಸಲು.
ಜಿಗಿಯುತಿದೆ ಮಗುವು ಸರಿಸೊಗಸು ಸವಿದು,
ಸರಿಮುಗಿದು ಬರಿದಾಗಿದೆ ಬೆಳ್ಳಿ ಬಟ್ಟಲು  |೮|

ಮಗುವಿನೊಂದಿಗೆ ಮಗುವಾಗಿ, ಬೊಂಬೆಯಾಟವಂದದಿ
ತಾಯ್ ತಾನು ಕುಣಿದು, ನಗಿಸಲೆತ್ನಿಸುತಿಹಳು ಮಗುವ.
ಕೈಗಳನು ಹರಡಿ, ಕಾಲ್ಗಳನು ನೀಡಿ, ಬೊಗಸೆಕಣ್ಗಳ
ಹೊರಳಿಸಿ, ಚೆಲ್ಲುತಿಹುದು ಮಗುವು ನಗುವ.  |೯|

ಬಿಟ್ಟಿರಳು ಜನನಿ ಮಗುವನಗಲಿ ಕ್ಷಣವು,
ಬಾಳುತಿಹಳವಳು ದೈವನಿರ್ಮಿತ ಸಂಭಂಧ.
ಪ್ರೀತಿ ಮಮತೆಯ ಗಂಟು, ತಾಯ್ ಮಗುವ ಬಂಧಿಸೆ,
ವರ್ಣನಾತೀತ ಇವರೀರ್ವರ ಅನುಭಂಧ.  |೧೦|

ಯಾವ ರಸಋಶಿಗೆ, ಯಾವ ರಸಕವಿಗೆ ಸಾಟಿ,
ಮಮತೆಯ ಕವನಗಳ ಪ್ರಣಯಲೇಖನಿಯೊಳು ಬರೆದೀ ಕವಯತ್ರಿಗೆ?
ಯಾವ ಸಂಭಂಧವು, ಯಾವ ಅನುಬಂಧವು ಸಾಟಿ,
ಇವರೀರ್ವರ ಜನುಮ ಜನುಮದ ಪವಿತ್ರ ಮೈತ್ರಿಗೆ  |೧೧|

- ಚಂದ್ರಹಾಸ

1 comment: