When my daughter first saw the moon....
==ಚಂದ್ರನ ಪ್ರಥಮ ದರ್ಶನ==
ಮೋಹನ ಚಂದ್ರನ ಪ್ರಥಮ ದರ್ಶನವ
ಪಡೆದಿಹಳೆನ್ನ ಮುದ್ದು ಮಗಳು.
ಬೆಳದಿಂಗಳ ಬೆಳ್ಳಿಕಿರಣ ಝರಿ ಧುಮಿಕಿಹೆ,
ಅವಳ ನಯನ ಸರೋವರದೊಳು.
ಕಡುನೀಲಿ ಕೊಳದಳಿ ಬಿಚ್ಚರಳಿ ನಿಂತಿದೆ
ಶ್ವೇತಪುಷ್ಪ ಅಲ್ಲಿ.
ಕಣ್ ರೆಪ್ಪೆ ಬಡಿಯದೆ, ಬಿಡುಗಣ್ಣ ನೋಟ
ಹರಿಸಿಹಳು ಬಾಲೆಯಿಲ್ಲಿ.
* * * *
ಜ್ಯೋತ್ಸ್ನಾಕಿರಣದ ಮುತ್ತಿನವಳಗಳು
ಸೇರಿಹುದಿವಳ ಕಣ್ ದೀಪ.
ಚಂದ್ರಬಿಂಬವು ನಾಟ್ಯವಾಡಿದೆ
ತುಂಬಿವಳ ನಯನಮಂಟಪ.
ಮೃಗಧರನು ಬೀರಿಹ ಮೋಹಕ ನಗೆಯ
ಗಗನ ಮಾರ್ಗದಲ್ಲಿ.
ವಿಸ್ಮಯವು ಮೂಡಿಸಿದೆ ಮುದ್ದಾದ ಭಾವ
ಈ ಚೆಲುವೆಯ ಮೊಗದಲ್ಲಿ.
** **
ಬೆಳಕಿನ ಚೆಂಡನು ಘಕ್ಕನೆ ಹಿಡಿಯಲು
ಬಾನಿಗೆ ಬಾಲೆಯು ಕೈ ಚಾಚಿಹಳು.
ದೊರಕದೆ ಚೆಂಡು 'ಏಯ್' ಎಂದೆನುತ ಕೋಪದಿ
ಗುಡು ಗುಡು ಗುಡಿಗಿದಳು.
ಭುವನವ ಬೆಳಗುವ ಶಶಿಯೇ ಬೆಚ್ಚಿದ
ಕಂಡೀ ಭೀಷಣ ಘರ್ಜನೆಯ.
ಭೂಮಿಗಿರುವ ಬಹುದೂರ ಕಂಡು
ತಾಳಿಹನು ತಾನು ನೆಮ್ಮದಿಯ.
ಮುನಿದ ಬಾಲೆಯ ಹೃದಯ ಗೆಲ್ಲಲು
ಕೈಬೀಸಿ ಕರೆದಿಹ ಸಂತಸದಿ.
ನಭಕುಂಡದೊಳಿರುವ ನವನೀತ ಕಂಡು
ನಲಿದಿಹಳಿವಳು ಸೋಜಿಗದಿ.
* * * *
ಧರೆಯ ತಿಮಿರವನೋಡಿಸುವ ಅಮೃತಕರ
ಸರ್ವರಿಗೂ ಭಗವಂತ.
ಇವಳ ಸಮ್ಮೊಹಕ ನಯನವ ಕಂಡ ಶಶಿಯೇ
ಇಂದು ಪುಣ್ಯವಂತ.
* ** *
ನಲಿದಿದೆ ಬಾನು,ಹಾಡಿದೆ ಹಕ್ಕಿ, ಮಿಂಚಿದೆ ತಾರೆ,
ಇವರಾಟವ ನೋಡಿ ಜಗ ಸದನದಲಿ.
ಸೊಬಗದು ಹರಿದಿದೆ, ಸಂತಸವುಕ್ಕಿದೆ,
ಆನಂದವರಳಿದೆ ವಿಶ್ವಹೃದಯದಲಿ.
ಒಲಿದೆ ನಾನ್ ಇವರಾಡುತಿಹ ಮೋಜಿನಾಟಕೆ.
ಸುರಿದೆ ಸಿಹಿಮುತ್ತಿನ ಮಳೆ, ಬಿಗಿದಪ್ಪಿ ಮಗಳ ಹಾಲ್ಗಲ್ಲಕೆ.
- ಚಂದ್ರಹಾಸ
No comments:
Post a Comment